ಕಾಲಭೈರವ

ಶಿವನ ಪಂಚವಿಂಶತಿ ಲೀಲೆಗಳಲ್ಲಿ ಒಂದು. ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ತಾನೇ ಒಡೆಯ, ತನಗಿಂತ ಅಧಿಕರು ಯಾರೂ ಇಲ್ಲವೆಂದು ಬ್ರಹ್ಮ ಒಮ್ಮೆ ಅಹಂಕಾರ ಪಡುತ್ತಿರುವಾಗ ವಿಷ್ಣು ಮೊದಲಾದವರ ಅಪೇಕ್ಷೆಯಂತೆ ವೇದಗಳು ಶಿವನೇ ನಿತ್ಯಕರ್ತೃವೆಂದೂ ಸರ್ವತಂತ್ರಸ್ವತಂತ್ರನೆಂದೂ ಶಿವಾಧಿಕ್ಯವನ್ನು ಸ್ಥಾಪಿಸಿದುವು. ಆದರೂ ಬ್ರಹ್ಮ ಒಪ್ಪಲಿಲ್ಲ. ಆಗ ಪಂಚವದನನಾದ ಪರಮೇಶ್ವರ ಅಲ್ಲಿ ಮೂರ್ತೀಭವಿಸಿದ. ಬ್ರಹ್ಮ ತನ್ನ ನಾಲ್ಕು ಮುಖಗಳ ಜೊತೆಗೆ ಮತ್ತೊಂದು ಮುಖವನ್ನು ಕಲ್ಪಿಸಿಕೊಂಡು ಶಿವನಿಗಿಂತ ತಾನೇನು ಕಡಿಮೆಯೆಂದು ವಿಜೃಂಭಿಸಿದ. ಬ್ರಹ್ಮನ ಗರ್ವದ ಮಾತುಗಳನ್ನು ಕೇಳಿದ ಶಿವ ಕಾಲಭೈರವನ ಆಕಾರವನ್ನು ತಳೆದು ಅಹಂಕರಿಸಿ ನುಡಿದ ಅವನ ತಲೆಯನ್ನು ತನ್ನ ಉಗುರುಕೊನೆಯಿಂದ ಚಿವುಟಿದ. ಅದೇ ಕಾಲಭೈರವ ಲೀಲೆಯೆಂದು ಪ್ರಸಿದ್ದವಾಯಿತು. ಮುಂದೆ ಭೈರವ ಅಜಕಪಾಲವನ್ನು ಹಿಡಿದು ಗರ್ವಿತರ ರಕ್ತದಿಂದ ಅದನ್ನು ತೃಪ್ತಿಪಡಿಸುವುದಾಗಿ ನುಡಿದು ಭಿಕ್ಷೆಗೆ ಹೊರಟ. ವೈಕುಂಠಕ್ಕೆ ಬಂದಾಗ ವಿಷ್ಣು ಚಕ್ರದಿಂದ ತನ್ನ ಹಣೆಯನ್ನು ಸೀಳಿಕೊಂಡು ಸುರಿದ ರಕ್ತದಿಂದ ಕಪಾಲವನ್ನು ತೃಪ್ತಿಪಡಿಸಲು ಪ್ರಯತ್ನಿಸಿದ. ಅದೆಲ್ಲವನ್ನೂ ಪಾತ್ರೆ ಇಂಗಿಸಿತು. ವಿಷ್ಣು ನಿಸ್ಸತ್ತ್ವನಾಗಿ ಕೆಳಕ್ಕೆ ಉರುಳಿದ. ಅನಂತರ ಶಿವನ ಕೃಪಾಮೃತದೃಷ್ಟಿಯಿಂದ ಎಚ್ಚೆತ್ತು ಶಿವನನ್ನು ಸ್ತುತಿಸಿದ. ಹೀಗೆ ಶಿವ ಇಂದ್ರಾದಿ ದೇವತೆಗಳಿಗೆಲ್ಲ ವಿವೇಕವನ್ನು ಕರುಣಿಸಿದ. ಕಾಲಭೈರವಲೀಲೆ ಮತ್ತು ಭಿಕ್ಷಾಟನೆ ಲೀಲೆಗಳ ಆಧಾರದ ಮೇಲೆ ಕಾಪಾಲಿಕ ಶೈವಮತಪ್ರವೃತ್ತವಾಗಿದೆ. ಶಿವಾಗಮಗಳು ಮತ್ತು ಶಿವಪುರಾಣಗಳಲ್ಲಿ ಈ ಲೀಲೆಯ ವರ್ಣನೆಗಳಿವೆ.  

 (ಎಂ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ